Monday, February 14, 2011

ಪ್ರೀತಿಯಿಂದ ಪ್ರೀತಿಗಾಗಿ...


ಈ ಪ್ರೀತಿ ಒಂಥರಾ ಕಚಗುಳಿ... ಇದು ಕೇವಲ ಯುವಪ್ರೇಮಿಗಳಿಗೆ ಸೀಮಿತವೇ? ಈ ಪ್ರಶ್ನೆಯನ್ನ ಪ್ರತಿಯೊಬ್ಬರೂ ಕೇಳಿಕೊಂಡರೆ ಒಳ್ಳೆಯದು ಅನ್ಸುತ್ತೆ.
ಪ್ರೀತಿಗೆ ಅಂಟಿಕೊಂಡಿರುವ ತುಂಟತನ, ಕಚಗುಳಿತನ ಮದುವೆ-ಮಕ್ಕಳು ಅಂತ ಆಗಿಬಿಟ್ಟರೆ ಸಾಕು ಕಣ್ಮರೆಯಾಗಿ ಬಿಡುತ್ತವೆ. ಇದಕ್ಕೆ ಕಾರಣವೇನು ಅಂತ ಹುಡುಕುತ್ತಾ ಹೊರಟರೆ, ಅದಕ್ಕೆ ಕಾರಣ ನಾವೇ ಆಗಿರ್ತೀವಿ. ಮದುವೆಯಾಯ್ತು-ಮಕ್ಕಳೂ ಆದ್ವು ಇನ್ನೆಂತಹ ತುಂಟತನ, ಜವಾಬ್ದಾರಿಯಿಂದ ಇರ್ಬೇಕು ಅಂತ, ನಮ್ಮಲ್ಲಿಯ ತುಂಟತನಕ್ಕೆ ಫುಲ್-ಸ್ಟಾಪ್ ಹಾಕಿಬಿಡ್ತೀವಿ. ನಮಗರಿವಿಲ್ಲದೆ ಸಂಗಾತಿಯೊಂದಿಗೆ ಹಂಚಿಕೊಳ್ಳಬಹುದಾದ ಒಂದು ಜಬರದಸ್ತಾದ ರಸ ಘಳಿಗೆಗಳನ್ನ ಕಳೆದುಕೊಳ್ತೀವಿ.
          ಒಂದು ಕ್ಷಣ ಯೋಚನೆ ಮಾಡಿ, ಮದುವೆ ಮುಂಚೆಯಾದ್ರೆ, ಸಂಗಾತಿಗಾಗಿ ಏನೆಲ್ಲಾ ಮಾಡ್ತೀವಿ, ಊಹಿಸಲಾಗದಂತಹ ಅನಿರೀಕ್ಷಿತ ಉಡುಗೊರೆ ಕೊಟ್ಟು ಸಂಗಾತಿಯನ್ನ ಬೆರಗು ಗೊಳಿಸ್ತೀವಿ. ಆ ಉಡುಗೊರೆ ದುಬಾರಿಯದ್ದೇ ಆಗಿರಬೇಕು ಅಂತೇನು ಇಲ್ಲ. ಎಲ್ಲೋ ದೂರದಲ್ಲಿದ್ದಾಗ ಅರೆಕ್ಷಣದ ಭೆಟ್ಟಿಗಾಗಿ ಅಷ್ಟುದೂರದಿಂದ ಬಂದು ಸಂಗಾತಿಯ ಕಣ್ಣಲ್ಲಿ ಖುಷಿಯನ್ನ ತುಂಬಿಕೊಡುವ ಉಡುಗೊರೆಗೆ ಬೆಲೆಕಟ್ಟಲು ಸಾಧ್ಯವೆ? ಸಂಸಾರದ ಜಂಜಾಟಗಳಲ್ಲಿ, ಜವಾಬ್ದಾರಿಗಳಲ್ಲಿ ಕಳೆದು ಹೋಗಿ ಅಂತಹ ಅನುರಾಗದ ಅಪರೂಪದ ಕ್ಷಣಗಳನ್ನು ಸವಿಯದೆ ಹೋಗ್ತೀವಿ.
          ಇನ್ನೇನು ಇಹಯಾತ್ರೆ ಮುಗಿಸಲು ಕೆಲವೇ ಕ್ಷಣಗಳು ಬಾಕಿಯಿದ್ದಾಗ ನಮ್ಮೆಲ್ಲಾ ಪ್ರೀತಿ-ಪಾತ್ರರಿಗೆ ಎಷ್ಟರ ಮಟ್ಟಿಗೆ ಪ್ರೀತಿ ವ್ಯಕ್ತಪಡಿಸಿದ್ವಿ? ಅಂತ ನಮ್ಮನ್ನು ನಾವೇ ಪ್ರಶ್ನಿಸಿ ಕೊಂಡರೆ, ಛೇ! ನಾನು ಇನ್ನೂ ಸೊಗಸಾಗಿ ಜೀವನ ಮಾಡಬಹುದಿತ್ತು ಅಂತ ಅನ್ನಿಸಿದರೆ, ಏನುಪಯೋಗ? ಆಗ ಏನು ಮಾಡಲಾಗದ ಸ್ಥಿತಿಯಲ್ಲಿರ್ತೀವಿ. ಬದುಕು ತನ್ನ ಗರ್ಭದಲ್ಲಿ ಏನೆಲ್ಲಾ ಅಡಗಿಸಿಟ್ಟು ಕೊಂಡಿದೆ, ಅದೆನ್ನೆಲ್ಲಾ ಪಡೆಯಬೇಕಂದರೆ ಪ್ರೀತಿಯಿಂದ, ಆಸ್ಥೆಯಿಂದ ಬದುಕಿದರೆ ಮಾತ್ರ ಸಾಧ್ಯ.
          ಪ್ರೀತಿ ವ್ಯಕ್ತ ಪಡಿಸೋಕೆ ಫೆಬ್ರವರಿ ಹದಿನಾಲ್ಕೇ ಆಗಿ, ಯುವ-ಪ್ರೇಮಿಗಳೇ ಆಗಿರಬೇಕಂತೇನಿಲ್ಲ. ಅನ್ಯರೊಂದಿಗೆ ಸಮಾಧಾನವಾಗಿ ಎಷ್ಟೊಂದು ಪ್ರೀತಿಯಿಂದ ಮಾತಾಡ್ತೀವಿ, ಆದರೆ ಸದಾಕಾಲ ನಮಗೆ ಬೆನ್ನೆಲುಬಾಗಿರುವ, ಅದೆ ನನ್ನವರು ಅಂತ ಅನ್ನಿಸಿಕೊಂಡ ಅಪ್ಪ-ಅಮ್ಮ-ಅಣ್ಣ-ತಂಗಿ-ಹೆಂಡತಿ ಜೊತೆಗೆ ಪ್ರೀತಿಯಿಂದ ಎಷ್ಟು ಸಲ ಮಾತಾಡ್ತೀವಿ? ಸದಾಕಾಲ ಪ್ರೀತಿಯಿಂದ ಮಾತಾಡ್ತಾಯಿದ್ದು, ಪ್ರೀತಿ ಧಾರೆಯೆರೆಯುತ್ತಾ ಇದ್ರೆ ಅದಕ್ಕಿಂತ ಮಿಗಿಲಾದ ಉಡುಗೊರೆ ಇದೆಯಾ?
ಈ ಪ್ರೇಮಿಗಳ ದಿನ- ಪಾಶ್ಚಾತ್ಯರಿಂದ ಬಂದದ್ದು ಅಂತ ಮೂಗು ಮುರಿಯುವುದರ ಬದಲಾಗಿ, ನಮ್ಮ ಸಂಸ್ಕೃತಿಗೆ ಒಗ್ಗಿ ಕೊಳ್ಳುವ ಹಾಗೆ ಆಚರಿಸುವುದು ನಮ್ಮ ಕೈಯಲ್ಲೆ ಇದೆ.

ಪ್ರೀತಿಯಿಂದ ಪ್ರೀತಿಗಾಗಿ...
ಅಮರ್