ಕಛೇರಿಯಲ್ಲಿ ಯಾವುದೋ ಕೆಲಸದಲ್ಲಿ ಸಂಪೂರ್ಣ ಮಗ್ನನಾಗಿದ್ದ ನನಗೆ, ಯಾರೋ ತಟ್ಟಿ ಹೇಳಿದ ಹಾಗೆ ತಕ್ಷಣಕ್ಕೆ ಜ್ನಾಪಕಕ್ಕೆ ಬಂದದ್ದು ನಮ್ಮ ಮದುವೆ ವಾರ್ಷಿಕೋತ್ಸವಕ್ಕೆ ಕೇವಲ ನಾಲ್ಕೇ ದಿನಗಳು ಬಾಕಿ ಇರುವುದು ಅಂತ. ಏನಾದ್ರು ಉಡುಗೊರೆ ಕೊಡಬೇಕು ಅಂತ ಯೋಚನೆ ಬಂದು ಕೂತೇ ಬಿಡ್ತು ತಲೆಯಲ್ಲಿ. ಸರಿ ಸಂಜೆ ಮನೆಗೆ ಹೋಗುವಾಗ ಯೋಚಿಸಿ ಒಂದು ನಿರ್ಧಾರಕ್ಕೆ ಬಂದರಾಯ್ತು ಅಂತ ಯೋಚನೆಯನ್ನ ಆ ಕ್ಷಣ ಕೈಬಿಡುವುದು ಮೇಲು ಅಂದು ಕೊಂಡ ನನಗೆ, ಮುಂದು ಆಗುವುದರ ಅರಿವು ಆಗ ಇರಲಿಲ್ಲ!
ಆ ಕ್ಷಣದ ಯೋಚನೆ ನಂತರ ಮದುವೆ ವಾರ್ಷಿಕೋತ್ಸವ-ಉಡುಗೊರೆ ಅಂತ ಮತ್ತೆ ನೆನಾಪಾಯ್ತು. ನೆನಪಾದ ಕೂಡಲೆ, ಈವತ್ತು ಯಾವದಿನ ಅಂತ ಮೋಬೈಲ್ನಲ್ಲಿದ್ದ ಕ್ಯಾಲೆಂಡರ್ ನೋಡಿದ ನನಗೆ, ನಿದ್ದೆ ಮಂಪರು, ಕಾದಿರುವ ಪಾತ್ರೆಯಲ್ಲಿ ಅಳಿದುಳುದಿದ್ದ ನೀರು ತಕ್ಷಣಕ್ಕೆ ಆರಿ ಹೋದಹಾಗೆ ಆರಿ ಹೋಗಿತ್ತು. ಯಾಕಂದರೆ ಆವತ್ತು ನಮ್ಮ ಮದುವೆ ವಾರ್ಷಿಕೋತ್ಸವದ ದಿನವಾಗಿತ್ತು. ನನ್ನಾಕೆ ತುಂಬಾ ಮುಂಚೇನೆ ಎದ್ದು ಸರಸರನೆ ಸ್ನಾನಕ್ಕೆ ಹೋಗಿದ್ದು, ಹುಸಿ ಕೋಪದಲ್ಲಿ ಓಡಾಡುತ್ತಾ ಇದ್ದದ್ದನ್ನು ಅಷ್ಟಾಗಿ ಗಮನಿಸಿದವನಾಗಿದ್ದೆ. ಏನಪ್ಪಾ ಮಾಡೋದು ಅಂತ ಝಂಗಾ ಬಲವೇ ಕ್ಷೀಣಿಸಿದಂತಾಯ್ತು. ಮುಂದೆ ನಾನು ಎದುರಿಸ ಬಹುದಾದ ಕ್ಷಣಗಳನು ಆ ಕ್ಷಣ ನಾನು ಊಹಿಸದವನಾಗಿದ್ದೆ. ಮೊದಲ ವಾರ್ಷಿಕೋತ್ಸವಕ್ಕೆ ಕಾಲು ಬಂಗಾರದ ಅಂಗಡಿ ಕಡೆಗೆ ಹೋಗಿತ್ತು. ಆದರೆ ನನ್ನ ಇಂದಿನ ಪಯಣ ಬಂಗಾರದ ಅಂಗಡಿ ಕಡೆಗೋ, ಸೀರೆ ಅಂಗಡಿ ಕಡೆಗೋ, ಎಲೆಕ್ಟ್ರಾನಿಕ್ಸ್ ಶೋ ರೂಂ ಕಡೆಗೋ ಅಂತ ಊಹೆ ಮಾಡಲಾಗದವನಾಗಿದ್ದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗಳ ಬಗ್ಗೆ ಅನುಕಂಪ ಮೂಡಿತು, ನನ್ನ ಪರಿಸ್ಥಿತಿ ನೆನೆದು ನನ್ನಲ್ಲಿ ನನ್ನ ಬಗ್ಗೆ ಕನಿಕರ ಮೂಡಬಹುದಾಗಿತ್ತು ಅಷ್ಟೆ! ಮೂಡಿತು ಕೂಡ.
ಲಗುಬಗನೆ ಎದ್ದವನೇ ಸೀದಾ ನನಗಾಗಿಯೆ ಕಾಯುತ್ತಾ ಕೊಳಲನ್ನು ಊದುತ್ತಾ ನಿಂತಂತಿದ್ದ ಕೃಷ್ಣನಿಗೆ ಕೈಮುಗಿದು, ಸಂಕಷ್ಟ ಹರ ಗಣಪನ ಮುಂದೆ ನಿಂತೆ,ದೇವರೆ ಈವತ್ತು ನೀನೆ ಕಾಪಾಡಪ್ಪಾ ಅಂತ ಮೇಲಿಂದ ಮೇಲೆ, ಮೇಲಿಂದ ಮೇಲೆ ಅಪ್ಲಿಕೇಷನ್ ಹಾಕೇ ಹಾಕಿದೆ, ಆದರೂ ಸಮಾಧಾನ ನನ್ನ ಹತ್ತಿರ ಸುಳಿಯುವ ಗೋಜಿಗೆ ಹೋಗಲಿಲ್ಲ. ನಮ್ಮ ಬೆಡ್ರೂಮಿನಿಂದ ಹೊರಗಡೆ ಬಂದೆ, ಅಲ್ಲಿ ನನ್ನಾಕೆ ಪೂಜೆಗೆ ಎಲ್ಲಾ ತಯಾರಿ ನಡೆಸಿದ್ದಳು!
ಏನು ಅಂತ ಮಾತಾಡಿಸಲಿ, “ಸ್ಸಾರಿ, ಮರೆತೋಯ್ತು, ಏನ್ ಉಡುಗೊರೆ ಬೇಕು, ಕೇಳು ಕೊಡಿಸ್ತೀನಿ” ಅಂದ್ರೆ ಸಾಕಾಗುತ್ತಾ, ನನ್ನ ಕೆಲಸ ಅಂತಹುದು, ಏನ್ ಮಾಡ್ಲಿ ಮರೆತು ಹೋಯ್ತು, ಕ್ಷಮಿಸೆಂದರೆ ಸಾಕಾಗುತ್ತಾ? ಎಂದು ತಿಳಿಯದವನಾಗಿದ್ದೆ. ಮರೆತಿದ್ದರ ಫಲವಾಗಿ ಒಂದರ ಜೊತೆ ಮತ್ತೊಂದು ಉಡುಗೊರೆಯ ಬೇಡಿಕೆ ಸೇರಿ ಕೊಂಡರೆ ಗತಿಯೇನು ಅಂತ, ಮನಸ್ಸು ವಿಲವಿಲ ಒದ್ದಾಡ್ತಾಯಿತ್ತು.
ಏನೆಂದು ನಾ ಹೇಳಲಿ
ಏನೆಂದು ನನ್ನಾಕೆ ಕೇಳುತಲಿ;
ಕ್ಷಮಿಸೆಂದು ನಾ ಸುಮ್ಮನಾದರೆ ಸಾಕೆ
ಕ್ಷಮೆ ಜೊತೆಗೆ ಮತ್ತೇನಾದರೂ ಕೊಡಬೇಕೆ!!
ಸರಸವೇನು ಸರಸರನೆ ಬರದಲ್ಲ
ಇಂದು ಲಗುಬಗನೆ ನಿನ್ನೆ ಆಗದಲ್ಲ!!
ನಾನು ನಾನಾಗಿರಲು ಆಗುತ್ತಾ ಇರಲಿಲ್ಲ. ಒಂದೊಂದು ಸೆಕೆಂಡ್ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. ಏನ್ ಗಿಫ್ಟ್ ತರಬೇಕು ಅಂತ ಒಂದು ನಿರ್ಧಾರಕ್ಕೆ ಬರುವುದು ಆ ಕ್ಷಣಕ್ಕೆ ನನ್ನಿಂದಾಗದ ಕೆಲಸವಾಗಿತ್ತು. ಸುಮ್ಮನೆ ಹ್ಯಾಪ್ ಮೋರೆ ಹಾಕ್ಕೊಂಡು ಹಾಗೆಯೇ ನಿಂತಿದ್ದೆ. ದೇವರ ಮನೆಯಿಂದ ಹೊರಬಂದ ನನ್ನಾಕೆ, ಏನಾದ್ರು ಮಾತಾಡಿಯಾಳು ಅಂತ ನಾನೆ ಅಡ್ಡ ಬಾಯಿ ಹಾಕಿ, ಮುಂದೆ ಆಗುವುದರ ಪರಿವೇ ಇಲ್ಲದೆ ಕೇಳಿಯೇ ಬಿಟ್ಟೆ, “ಮದುವೆ ವಾರ್ಷಿಕೋತ್ಸವ ಶುಭಾಶಯಗಳು, ನಿಂಗೆ ಏನ್ ಬೇಕು, ಕೇಳು ಕೊಡಿಸ್ತೀನಿ” ಅಂತ.
ನನ್ನಾಕೆ ಮುಂದಕ್ಕೆ ಹೋಗುತ್ತಾ ವಾರಿ ನೋಟ ಬೀರುತ್ತಾ ತಲಬಾಗಿಲ ಹತ್ತಿರ ಹೋದ್ಳು, ಬಾಗಿಲ ಪೂಜೆ ಮಾಡ್ತಾ ನನ್ನಾಕೆ ನನ್ನ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಂತರ ಒಳ ಬರುತ್ತಾ ಇರಬೇಕಾದ್ರೆ, ಮತ್ತೆ ಕೇಳಿದೆ. ಪ್ರತ್ಯುತ್ತರ ಏನೂ ಬರಲಿಲ್ಲ, ಹಾಗೆಯೆ ದೇವರ ಮನೆಯೊಳಗೆ ಹೋಗಿ ಉದ್ದಿನಕಡ್ಡಿ, ಕುಂಕುಮ ಇಟ್ಟು ಹೊರ ಬಂದು, ಸರ ಸರನೆ ಅಡುಗೆ ಮನೆ ಕಡೆ ಹೋಗುತ್ತಾ ಅಂದಿದ್ದು “ನಿಮ್ಮಿಷ್ಟ ಕಣ್ರೀ” . ಇದೊಳ್ಳೆ ಕತೆಯಾಯ್ತಲ್ಲ, ಇದೂ ಇನ್ನೂ ಕಷ್ಟ. ಏನ್ ತಂದ್ರೂ ತಾಪತ್ರಯ. ಎಂಥಾ ಪರಿಸ್ಥಿತಿಗೆ ನನ್ನನ್ನೆ ನಾನು ತಂದು ನಿಲ್ಲಿಸಿದ್ದೀನಲ್ಲಾ ಅಂತ ನನ್ನನ್ನೆ ನಾನು ಬೈದುಕೊಳ್ಳುವುದು ಬಾಕಿಯಿತ್ತು ಅಷ್ಟೆ.
“ಇಲ್ಲಾ ಈವತ್ತು ನೀನೇ ಕೇಳ್ಬೇಕು, ಏನ್ ಬೇಕೂ ಅಂತ” ಎಂದು ನಾನೂ ಹಠಮಾಡಿದೆ.ಅದಕ್ಕೆ ಪ್ರತಿಯಾಗಿ ನನ್ನಾಕೆ ಒಂದು ಕಂಡಿಷನ್ ಹಾಕಿದ್ಳು, “ಏನೇ ಕೇಳಿದ್ರೂ ಕೊಡಿಸ್ತೀನಿ ಅಂತ ಪ್ರಮಾಣ ಮಾಡಿ, ಕೇಳ್ತೀನಿ ಅಂದ್ಳು”. ಆ ಕ್ಷಣ ಇಂಗು ತಿಂದ ಮಂಗನಂತಾಗಿದ್ದೆ. ಆಯ್ತು ಎನ್ನದೇ ಬೇರೆ ವಿಧಿಯಿರಲಿಲ್ಲ. ಕಷ್ಟಪಟ್ಟು ಉಗುಳು ನುಂಗಿ “ಆಯ್ತು” ಅಂದೆ.
“ಮತ್ತೆ ಮತ್ತೆ ....
ನೀವು ಈವತ್ತು ರಜೆ ಹಾಕಿ ನನ್ ಜೋಡಿ ಇರಿ ಸಾಕು, ಬೇರೆ ಏನೂ ಬೇಡ, ಬರೀ ಕೆಲ್ಸ ಕೆಲ್ಸ ಅಂತ ಎಷ್ಟೊಂದಿನಗಳಾದ್ವು ನೆಮ್ಮದಿಯಿಂದ ಕೂತು ಮಾತನಾಡಿ” ಅಂತ ಕೇಳಿದಳು ನನ್ನಾಕೆ (ನನ್ನ+ ಆಕೆ)ಅಷ್ಟೆ.
ನಾನು....
~ಅಮರ್
No comments:
Post a Comment